ಪ್ರತಿಭೂತೀಕರಣ (ಸೆಕ್ಯೂರಿಟೈಜೇಷನ್)
	ಬ್ಯಾಂಕುಗಳು ಸಾಲ-ಮುಂಗಡಗಳ ಮೂಲಕ ಗ್ರಾಹಕರಿಗೆ ಹಣ ನೀಡುವಾಗ ಅದನ್ನು ಹಿಂಪಡೆಯಲು ಬೇಕಾದ ಭದ್ರತೆಯನ್ನು ಮಾಡಿಕೊಳ್ಳುವುದು ಸಹಜವಾದ ಕರ್ತವ್ಯವಾಗಿದೆ. ಸ್ಥಿರಾಸ್ತಿ, ಸರಕು, ಯಂತ್ರಸ್ಥಾವರಗಳು, ಪೀಠೋಪಕರಣಗಳು ಮೊದಲಾದವುಗಳನ್ನು ಆಧಾರವಾಗಿ ಬ್ಯಾಂಕು ತೆಗೆಕೊಳ್ಳುವುದು. ಇವುಗಳನ್ನು ಪ್ರತಿಭೂತಿ ಗಳೆಂದು ಕರೆಯುವುದು ವಾಡಿಕೆ.  ಗ್ರಾಹಕನು ಕಾರಣಾಂತರಗಳಿಂದಲೋ, ಉದ್ದೇಶ ಪೂರ್ವಕವಾಗಿಯೋ ಅಥವಾ ಕಾನೂನಿನಲ್ಲಿ ಲೋಪ-ದೋಷಗಳ ಲಾಭ ಪಡೆದೋ ಬ್ಯಾಂಕಿನ ಹಣವನ್ನು ವಾಪಸ್ಸು ಮಾಡುವಲ್ಲಿ ಉದ್ದೇಶಪೂರ್ವಕವಾಗಿ ವಿಫಲನಾಗುತ್ತಾನೆ. ಆಗ ಬ್ಯಾಂಕಿಗೆ ನ್ಯಾಯಾಲಯದ ಮೊರೆ ಹೋಗುವುದೊಂದೇ ದಾರಿ. ನಮ್ಮ ದೇಶದ ನ್ಯಾಯ ವ್ಯವಸ್ಥೆಯಲ್ಲಿ ಇದು ಬಹಳ ಲಂಬಿತವಾದ ಹಾದಿ. ಹಲವಾರು ಕಾರಣಗಳಿಂದ ನ್ಯಾಯ ತೀರ್ಮಾನ ಪಡೆಯುವಲ್ಲಿ 1) ವಿಳಂಬವಾಗುತ್ತದೆ 2) ಸಾಕಷ್ಟು ಹಣ ವ್ಯಯವಾಗುತ್ತದೆ 3) ಒಬ್ಬ ನ್ಯಾಯವಾದಿ/ವಕೀಲನ ನೇಮಕ ಅವನ ಶುಲ್ಕ ಹಾಗು ಅವನಿಗೆ ಬೇಕಾದ ಮಾಹಿತಿಯನ್ನು ಒದಗಿಸಿ ಕೊಡಲು ಪ್ರತ್ಯೇಕವಾಗಿ ಜನ ಬೇಕಾಗುತ್ತದೆ. ಹೀಗೆ ಈ ರೀತಿಯ ಹೆಚ್ಚು ಖಾತೆಗಳಿ ಇದ್ದರೆ ಬ್ಯಾಂಕಿನಲ್ಲಿ ಇದೇ ಒಂದು ದೊಡ್ಡ ವಿಭಾಗವಾಗುತ್ತದೆ.  ಲಕ್ಷಾಂತರ ದಾವೆಗಳು ದೇಶದಾದ್ಯಂತ ತೀರ್ಪಿಗಾಗಿ ಕಾದು ನ್ಯಾಯಾಲಯದಲ್ಲಿ ಕುಳಿತಿವೆ. ವಿಚಾರಣೆ, ತೀರ್ಪು ವಿಳಂಭವಾಗುತ್ತಿದ್ದಂತೆಯೇ ಬ್ಯಾಂಕಿನಲ್ಲಿ ಸಾಲದ ಖಾತೆಯಲ್ಲಿನ ಬಡ್ಡಿಯು ಏರುತ್ತಿರುತ್ತದೆ. ಇದು ಒಂದು ರೀತಿಯ ವಿಷವರ್ತುಲವಾಗಿದೆ. ಹೀಗಾಗಿ 2001ರಲ್ಲಿ ಬ್ಯಾಂಕುಗಳಲ್ಲಿ ವಸೂಲಿಯಾಗದೆ ಅನುತ್ಪಾದಕ ಆಸ್ತಿಯಾದ ಸಾಲದ ಮೊತ್ತವು 64000 ಕೋಟಿಯನ್ನು ದಾಟಿತ್ತು. ಬ್ಯಾಂಕುಗಳ ಒಟ್ಟು ಸಾಲದ ಶೇಕಡಾ 11.80% ರಷ್ಟು ಅನುತ್ಪಾದಕ ಆಸ್ತಿಯೇ ಆಗಿತ್ತು. ಅದರಿಂದ ಬಹಳಷ್ಟು ಬ್ಯಾಂಕುಗಳು ನಷ್ಟ ಬ್ಯಾಂಕುಗಳಾದವು. ರಿಸರ್ವ್ ಬ್ಯಾಂಕಿನ ಕಟ್ಟನಿಟ್ಟಾದ ಕ್ರಮಗಳಿಂದ ಬ್ಯಾಂಕುಗಳು ನಲುಗಿ ಕುಸಿಯತೊಡಗಿದವು. ಇದನ್ನು ಅರಿತ ರಿಸರ್ವ್ ಬ್ಯಾಂಕು sನರಸಿಂಹನ್ ಸಮಿತಿಯ ಸಲಹೆಗಳ ಜತೆಗೆ ಅಂಧುಅರ್ಜುನ ಸಮಿತಿಯನ್ನು ರಚಿಸಿ ಆ ಸಮಿತಿಯು ನೀಡಿದ ಶಿಪಾರಸಿನ ಮೇರೆಗೆ ಸರ್ಕಾರದ ವತಿಯಿಂದ ಒಂದು ಹೊಸ ಕಾಯಿದೆಯನ್ನೇ ಹುಟ್ಟು ಹಾಕಿಸಿತು. ಹಣಕಾಸಿನ ಆಸ್ತಿಗಳ ಪ್ರತಿಭೂತೀಕರಣ ಮತ್ತು ಪುನರ್ನಿರ್ಮಾಣ ಹಾಗು ಪ್ರತಿಭೂತಿ ಬಡ್ಡಿಯ ವಸೂಲಿ ಪ್ರಕ್ರಿಯೆ ಕಾಯಿದೆ, 2002 ಅನ್ನು 21ನೇ ಜೂನ್, 2002 ರಿಂದ ಪ್ರಾರಂಭವಾಗುವಂತೆ ಶಾಸನ ಮಾಡಲಾಯಿತು.
	ಈ ಕಾಯಿದೆಯಿಂದ ಮುಖ್ಯವಾಗಿ ಎರಡು ಪ್ರಮುಖ ಸೌಲಭ್ಯಗಳನ್ನು ಸರ್ಕಾರವು ಬ್ಯಾಂಕ್‍ಗಳಿಗೆ ಒದಗಿಸಿತು. 
1. ಈ ಕಾಯಿದೆಯ ಅನ್ವಯ ರಿಸರ್ವ್ ಬ್ಯಾಂಕಿನ ಪೂರ್ವಾನುಮತಿಯನ್ನು ಪಡೆದು ಈ ದಿಶೆಯಲ್ಲಿ ಕಂಪನಿಯನ್ನು ಸ್ಥಾಪಿಸಲು ಕಾನೂನಿನ ಅನುಕೂಲ ಮಾಡಿಕೊಡಲಾಯಿತು.  ಈ ಕಂಪನಿಗಳಿಗೆ ಕಾಯಿದೆಯ ನಿಯಮದನ್ವಯ ಬ್ಯಾಂಕ್‍ಗಳ ಸಾಲ-ಮುಂಗಡಗಳನ್ನು ಕ್ರಯಿಸುವ/ತೆಗೆದುಕೊಳ್ಳುವ ಅನುಕೂಲಮಾಡಿಕೊಡಲಾಗಿದೆ. ಇವುಗಳಿಗೆ ಸೆಕ್ಯೂರಿಟೈಜೇಷನ್ ಕಂಪನಿಗಳು ಅಥವಾ ಆಸ್ತಿಗಳ ಪುನರ್ನಿರ್ಮಾಣ ಕಂಪನಿಗಳು ಸ್ಥಾಪಿಸಲು ಈ ಕಾಯಿದೆಯು ಅನುಕೂಲ ಮಾಡಿಕೊಟ್ಟಿದೆ.  ಬ್ಯಾಂಕುಗಳ ಅನುತ್ಪಾದಕ ಆಸ್ತಿಗಳಾದ ಸಾಲ-ಮುಂಗಡಗಳನ್ನು ತಾವು ತೆಗೆದುಕೊಂಡು ವಸೂಲಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಲು ಈ ಕಾಯಿದೆಯು ಆ ಉದ್ದೇಶದಿಂದ ಸ್ಥಾಪಿತವಾದ ಕಂಪನಿಗಳಿಗೆ ಚಾಲನೆ ನಿಡಿದೆ. 
2. ಇನ್ನೊಂದು ಮುಖ್ಯವಾದ ತಿರುವು ಎಂದರೆ, ಬ್ಯಾಂಕುಗಳು ತಮ್ಮ ಸಾಲ-ಮುಂಗಡಗಳ ವಸೂಲಿಗೆ ನ್ಯಾಯಾಲಯಗಳಿಗೆ ಹೋಗಿ ದೀರ್ಘಕಾಲದ ತನಕ ಕಾಯುವ ಮೊದಲಾದ ಸಂಕಷ್ಟಗಳಿಂದ ಪಾರಾಗಲು ಈ ಕಾಯಿದೆಯು ದಾರಿ ತೋರಿದೆ. ಆಯಾಯ ಬ್ಯಾಂಕುಗಳು ಈ ಕಾಯಿದೆಯ ಅನ್ವಯ ಸಾಲ ಪಾವತಿ ಮಾಡದಿರುವ ಗ್ರಾಹಕ ಸಾಲಗಾರರಿಗೆ ತಿಳುವಳಿಗೆ ಪತ್ರವನ್ನು ಕಳಿಸಿ ನಂತರ 60 ದಿನಗಳೊಳಗೆ ಅವರು ಸಾಲವನ್ನು ಕಟ್ಟದಿದ್ದರೆ ಅಥವಾ ಅವಧಿ ಮೀರಿದ ಕಂತು/ಮೊತ್ತವನ್ನು ಸಕಾಲದಲ್ಲಿ ಪಾವತಿ ಮಾಡದಿದ್ದರೆ, ನೇರವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಾಗು ಚರ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿದೆ. ವಸೂಲಿ ಅಧಿಕಾರಿಗಳು ಬ್ಯಾಂಕಿನ ಪರವಾಗಿ ಈ ಆದೇಶವನ್ನು ಪಾಲಿಸಬಹುದಾಗಿದೆ. ಈ ಕ್ರಮಕ್ಕೆ ಕಾಯಿದೆಯ ಬೆಂಬಲವಿರುವುದರಿಂದ ಸಾಲಗಾರನು ಬದ್ಧನಾಗಲೇ ಬೇಕಾಗುತ್ತದೆ. ಹಾಗೆ ಮಾಡದೆ ಸಾಲಗಾರನು ವಿರೋಧಿಸಿದಲ್ಲಿ ನ್ಯಾಯಾಲಯವನ್ನು ಧಿಕ್ಕರಿಸಿದಷ್ಟೇ ಗುರುತರವಾದ ಅಪರಾಧವಾಗುತ್ತದೆ. ಇದು ಬ್ಯಾಂಕುಗಳಿಗೆ ಸಕಾರ ನೀಡಿದ ವರದಾನವಾಗಿದೆ. 
(ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ